ಧಾರವಾಡ
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಧಾರವಾಡ, ರಾಷ್ಟ್ರೀಯ ಬಾಲ ಯೋಜನಾ ಸಂಘ ಧಾರವಾಡ, ಕಾರ್ಮಿಕ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಠಾತ್ ದಾಳಿ ಕೈಗೊಳ್ಳಲಾಯಿತು.
ದುರ್ಗದ ಬೈಲ್, ಶಾ ಬಜಾರ್, ಮೂರುಸಾವಿರ ಮಠದ ಪ್ರದೇಶ ಹಾಗೂ ಧಾರವಾಡದ ನೇಹರೂ ಮಾರ್ಕೇಟ್, ಸಿಬಿಟಿ, ಸೂಪರ ಮಾರ್ಕೇಟ್ ಸೇರಿದಂತೆ ವಿವಿಧ ಕಡೆ ನಡೆಸಲಾದ ಜಾಗೃತಿ ಮತ್ತು ದಾಳಿಯಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಸೇರಿದಂತೆ ಸ್ವಂತ ಉದ್ಯೋಗ ಹಾಗೂ ಪಾಲಕರಿಗೆ ಸಹಾಯ ಮಾಡುತ್ತಿದ್ದ ಮಕ್ಕಳನ್ನು ರಕ್ಷಿಸಿ ಪಾಲಕರಿಗೆ ಕಾನೂನಾತ್ಮಕ ತಿಳುವಳಿಕೆ ಮೂಡಿಸಿ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.
ಅವಳಿನಗರದಲ್ಲಿ ನಡೆದ ಹಠಾತ್ ದಾಳಿಗಳಲ್ಲಿ ಸುಮಾರು ೪೪ ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಲಾಗಿದೆ, ೪ ಜನ ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಿ ಕ್ರಮ ಕೈಗೊಳಗಳಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ೨೦ ಹಾಗೂ ಧಾರವಾಡದಲ್ಲಿ ೨೪ ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಲಾಯಿತು.
ಎನ್.ಸಿ.ಎಲ್.ಪಿ ನಿರ್ದೇಶಕ ಬಾಳಗೌಡ ಪಾಟೀಲ, ಕಾರ್ಮಿಕ ಅಧಿಕಾರಿ ಮಾರಿಕಾಂಬಾ ಹುಲಕೋಟಿ, ಮಲ್ಲಿಕಾರ್ಜುನ ಜೋಗೂರ, ಅಕ್ಬರ ಅಲ್ಲಾಪೂರ, ಶಮಿ ಹೆಚ್, ಸಂಗೀತಾ ಬೆನಕನಕೊಪ್ಪ, ಮೀನಾಕ್ಷಿ ಶಿಂದಿಹಟ್ಟಿ, ತಶಿಲ್ದಾರ ವಿಜಯಕುಮಾರ ಕಡಕೋಳ, ಡಾ ಕಮಲಾ ಬೈಲೂರ, ಸಂಲಕ್ಪ ಸಂಸ್ಥೆಯ ಪ್ರಕಾಶ ಹೂಗಾರ, ಮಕ್ಕಳ ಸಹಾಯವಾಣಿಯ ಚಂದ್ರಶೇಖರ ರಾಹುತರ, ಆನಂದ ಸವಣೂರ, ಉಮಾ ರೊಟ್ಟಿಗವಾಡ, ಮಕ್ಕಳ ರಕ್ಷಣಾ ಘಟಕದ ಕರೆಪ್ಪ ಕೌಜಲಗಿ, ಪ್ರಭಾಕರ ಜಿ, ಮಮ್ಮದಲಿ ತಶಿಲ್ದಾರ, ಎಸ್. ಎಂ ಮುಲ್ಲಾ ಸೇರಿದಂತೆ ಪೋಲಿಸ್ ಸಿಬ್ಬಂದಿ ಇದ್ದರು.

No comments: