ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ...


ಬೆಂಗಳೂರು, ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಮತ್ತು ನ್ಯಾಯಬದ್ಧ ವಾದವನ್ನು ಮಂಡಿಸಲಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ತೆಲಂಗಾಣ ಸರ್ಕಾರವು ಹೊಸ ತಗಾದೆ ತೆಗೆದಿದೆ. ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂಯೆ ನ್ಯಾಯಾಧಿಕರಣವು ಈಗಾಗಲೇ ಅಂತಿಮ ತೀರ್ಪನ್ನೂ ಸಹಾ ನೀಡಿದೆ. 2013ರಲ್ಲಿಯೇ ಕರ್ನಾಟಕ, ಮಹಾರಾಷ್ಟ್ರ ಮತ್ತು ಅಖಂಡ ಆಂಧ್ರ ಪ್ರದೇಶ ರಾಜ್ಯಗಳಿಗೆ ನೀರು ಹಂಚಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ ಬಳಿಕ ಐತೀರ್ಪಿನ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರವೂ ನಿರ್ಧರಿಸಿದೆ. ಹೀಗಾಗಿ ನೀರು ಹಂಚಿಕೆ ವಿಷಯದಲ್ಲಿ ಹೊಸದಾಗಿ ನ್ಯಾಯಾಧಿಕರಣ ಸ್ಥಾಪಿಸಬೇಕೆಂದು ತೆಲಂಗಾಣ ಸರ್ಕಾರದ ವಾದ ಅತಾರ್ತಿಕವಾಗಿದೆ ಎಂದು ಹೇಳಿರುವ ಸಚಿವರು, ರಾಜ್ಯದ ಹಿತಾಸಕ್ತಿ ಕಾಪಾಡಲು ತಾವು ಬದ್ಧ ಎಂದು ಪುನರುಚ್ಛರಿಸಿದ್ದಾರೆ..

ಮಹದಾಯಿ - ಗೋವಾ ವಾದ ಸತ್ಯಕ್ಕೆ ದೂರವಾದುದು:

ಮಹದಾಯಿ ನದಿ ನೀರು ಹಂಚಿಕೆ ಕುರಿತು ಈಗಾಗಲೇ ನ್ಯಾಯಾಧಿಕರಣವು ಐತೀರ್ಪು ನೀಡಿದ್ದು, ಕೇಂದ್ರ ಸರ್ಕಾರವೂ ಸಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಗೋವಾ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದು ಹಸ್ಯಾಸ್ಪದವಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಮಹದಾಯಿ ಯೋಜನೆಯ ಅನುಷ್ಠಾನದ ವಿಷಯವು ಈಗಾಗಲೇ ತಾರ್ಕಿಕವಾಗಿ ಅಂತ್ಯವಾಗಿದೆ. ಅರಣ್ಯ ಇಲಾಖೆ ಅನುಮೋದನೆ ಮಾತ್ರ ಬಾಕಿ ಇದ್ದು, ಇಂತಹ ಸಂದರ್ಭದಲ್ಲಿ ನೆರೆಯ ರಾಜ್ಯ ಗೋವಾ ಸುಖಾ ಸುಮ್ಮನೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರ್ಕಾರವು ಇದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿ, ಗೋವಾ ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ಛಾಯಾಚಿತ್ರ ಮತ್ತು ವಿಡೀಯೋಗಳು ಅವರೇ ಸೃಷ್ಟಿಸಿರುವ ದಾಖಲೆಗಳಷ್ಟೇ, ಮಹದಾಯಿ ಮತ್ತು ಮಲಪ್ರಭಾ ನದಿ ನಡುವೆ ಪ್ರಬಲ ಗೋಡೆ ನಿರ್ಮಿಸಲಾಗಿದೆ. ಮಹದಾಯಿ ನದಿಯ ಒಂದು ಹನಿ ನೀರೂ ಸಹ ಮಲಪ್ರಭಾ ನದಿ ಸೇರಿಲ್ಲ, ಇಂತಹ ಸುಳ್ಳು ದಾಖಲೆಗಳನ್ನು ಸುಪ್ರೀಂ ಕೋರ್ಟ್ ಸಹ ನಂಬುವುದಿಲ್ಲ ಎಂದು ಹೇಳಿದ ಜಲ ಸಂಪನ್ಮೂಲ ಸಚಿವರು, ಈ ಯೋಜನೆ ಸಂಬಂಧ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳ ಸಮಿತಿಯೊಂದು ಅಸ್ತಿತ್ವದಲ್ಲಿ ಇದ್ದು, ಈ ಸಮಿತಿಯಿಂದ ವಾಸ್ತವ ಸ್ಥಿತಿಯ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಅಕ್ರಮವಾಗಿ ಮಹದಾಯಿ ಹರಿವನ್ನು ತಿರುಗಿಸಿದ್ದೇವೆ ಎಂಬ ಗೋವಾ ರಾಜ್ಯದ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಸಚಿವರು, ಮಹದಾಯಿ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆ ಜಾರಿ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ಜಾರಿ ಮಾಡಿಯೇ ಸಿದ್ಧ ಎಂದು ಪುನರುಚ್ಛರಿಸಿದ್ದಾರೆ.

ಮಹದಾಯಿ ‌ಮತ್ತು ಕೃಷ್ಣಾ ನದಿ ನೀರು ಹಂಚಿಕೆ‌ ವಿಚಾರದಲ್ಲಿ ನೆರೆ ರಾಜ್ಯಗಳು ವಿವಾದ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರೂ ಸಹಾ ಕೇಂದ್ರ ಜಲಶಕ್ತಿ ಸಚಿವರಿಗೆ ತುರ್ತು ಪತ್ರ ಬರೆದಿದ್ದು ಕೂಡಲೇ ರಾಜ್ಯದ ಪಾಲಿನ‌‌ ನೀರನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ... ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ... Reviewed by News10Karnataka Admin on October 10, 2020 Rating: 5

No comments:

Powered by Blogger.